ರೇಗನ್, ರೊನಾಲ್ಡ್
1911-2004. ಅಮೆರಿಕದ ಮಾಜಿ ಅಧ್ಯಕ್ಷ (1981-89) ಹಾಗೂ ಪ್ರಸಿದ್ಧ ಹಾಲಿವುಡ್ ಚಲನಚಿತ್ರನಟ. ಇವನು 1911 ಫೆಬ್ರವರಿ 9 ರಂದು ಇಲಿನಾಯ್ಸನ ಟಂಪಿಕೊದಲ್ಲಿ ಜನಿಸಿದ. ಜಾನ್ ರೇಗನ್ ಹಾಗೂ ನೆಲ್ಲೀ ವಿಲ್‍ಷನ್‍ರ 2ನೆಯ ಮಗ. ಇವನ ಮನೆತನದ ಪೂರ್ವಜರು, ಐರ್ಲೆಂಡಿನಿಂದ ಅಮೆರಿಕಕ್ಕೆ ವಲಸೆ ಬಂದವರು. ಇವನು ಡಿಕ್ಸಾನ್‍ನ ನಾರ್ಥ್‍ಸೈಡ್ ಹೈಸ್ಕೂಲ್‍ನಲ್ಲಿ ಶಾಲಾವಿದ್ಯಾಭ್ಯಾಸ ಮುಗಿಸಿ 1921 ರಾಕ್ ನದಿಯ ಹತ್ತಿರವಿದ್ದ ಲೊವೆಲ್ ಪಾರ್ಕ್‍ನಲ್ಲಿ ಜೀವರಕ್ಷಕದಳದಲ್ಲಿ ಸೇವೆಸಲ್ಲಿಸಿ 77 ಜನರನ್ನು ರಕ್ಷಿಸಿದ (1926). ಅನಂತರ ಯುರೇಕ ಕಾಲೇಜಿನಿಂದ ಅರ್ಥಶಾಸ್ತ್ರ ಹಾಗೂ ಸಮಾಜಶಾಸ್ತ್ರದಲ್ಲಿ ಪದವಿಪಡೆದ (1932). ಫುಟ್‍ಬಾಲ್, ಕಥೆಹೇಳುವುದು, ನಾಟಕ, ಅಭಿನಯ ಇವನ ಮೆಚ್ಚಿನ ಹವ್ಯಾಸಗಳು. ಶಿಕಾಗೋದ ರೇಡಿಯೊದಲ್ಲಿ ಸೇವೆ ಸಲ್ಲಿಸಿದ ಅನಂತರ ಲವ್‍ಈಸ್ ಆನ್ ದಿ ಏರ್ ಎಂಬ ಚಲನ ಚಿತ್ರದ ನಾಯಕನಾಗಿ ಹಾಲಿವುಡ್ ಪ್ರವೇಶಿಸಿದ (1937). “ದಿ ಗಿಪ್ಪರ್” ಚಲನಚಿತ್ರದಲ್ಲಿ ಜಾರ್ಜ್‍ಪಾತ್ರದಿಂದ ಪ್ರಸಿದ್ಧನಾದ ಇವನನ್ನು ಅಮೆರಿಕನ್ನರು ಗಿಪ್ಪರ್ ಎಂದೇ ಕರೆಯುತ್ತಿದ್ದರು. ಉತ್ತಮ ಅಭಿನಯ, ಅಂಗ ಸೌಂದರ್ಯ ಹೊಂದಿದ್ದ ಇವನು 2 ದಶಕಗಳಲ್ಲಿ 57 ಚಿತ್ರಗಳಲ್ಲಿ ನಟಿಸಿದ. ಅಭಿನೇತ್ರಿ ಜನೆ ವೈಮ್ಯಾನ್‍ಳನ್ನು (1940) ಹಾಗೂ ಅಭಿನೇತ್ರಿ ನಾನ್ಸಿಡೆವಿಸ್‍ಳನ್ನು (1952) ವಿವಾಹವಾದ. ಚಲನಚಿತ್ರರಂಗದಲ್ಲಿ ಹೆಸರುಮಾಡಿದ ಇವನು ಅಮೆರಿಕದಲ್ಲೆಲ್ಲ ಸಂಚರಿಸಿ ಜನರ ಪ್ರೀತಿಪಾತ್ರನಾದ. ಇವನು ಕ್ಯಾಲಿಫೋರ್ನಿಯದ 33ನೆಯ ಗವರ್ನರ್ ಆಗಿ ಎರಡುಬಾರಿ ಚುನಾಯಿತ ನಾದ (1966-70). ಇವನ ಅಧಿಕಾರಾವದಿ üಯಲ್ಲಿ ಬಜೆಟ್, ಹಣಕಾಸು ಸುಧಾರಣೆ, ಮರಣದಂಡನೆ ನಿಷೇಧದಂತಹ(1972) ಗಮನಾರ್ಹ ಸುಧಾರಣೆ ಮಾಡಿದ.

1980ರಲ್ಲಿ ನಡೆದ ಅಧ್ಯಕ್ಷ ಪದವಿ ಚುನಾವಣೆಗೆ ರಿಪಬ್ಲಿಕ್ ಪಕ್ಷದಿಂದ ಸ್ಪರ್ಧಿಸಿ ಜಿಮ್ಮಿಕಾರ್ಟ್‍ರ್ ವಿರುದ್ಧ ಬಹುಮತ ಪಡೆದು 1981 ಜನವರಿ 20ರಲ್ಲಿ ಅಮೆರಿಕದ ಅಧ್ಯಕ್ಷನಾದ. 69 ದಿನಗಳ ಅನಂತರ ಕೊಲೆ ಆಪಾದನೆಯ ಚ್ಯುತಿ ಬಂದರೂ ಅದನ್ನು ಸುಧಾರಿಸಿ ಅಧ್ಯಕ್ಷ ಪದವಿಯಲ್ಲಿ ಮುಂದು ವರಿದ. ಇವನು ಉದ್ಯೋಗ ಸೃಷ್ಟ, ರಾಷ್ಟ್ರೀಯ ರಕ್ಷಣೆ ಬಲಪಡಿಸುವುದು, ಆರ್ಥಿಕ ಬೆಳೆವಣಿಗೆ, ಹಣದುಬ್ಬರಕ್ಕೆ ಕಡಿವಾಣ ಹಾಕಿದ್ದು ಸರ್ಕಾರದ ಖರ್ಚು ಕಡಿಮೆಮಾಡುವುದು, ರಾಜ್ಯಾದಾಯಕ್ಕೆ ಸಂಬಂಧಿಸಿದಂತೆ ತನ್ನದೆ ರೇಗನಾಮಿಕ್ಸ್ ಎಂಬ ಸಿದ್ಧಾಂತ ನೀಡಿದ.
1984ರಲ್ಲಿ 2ನೆಯ ಬಾರಿ ಅಧ್ಯಕ್ಷನಾಗಿ ಚುನಾಯಿತನಾದ ಅನಂತರ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಜಾರಿಗೊಳಿಸಿದನಲ್ಲದೆ ಏಡ್ಸ್ ಸಂಶೋಧನೆ ಮತ್ತು ನಿಯಂತ್ರಣಕ್ಕೆ ಚಾಲನೆ ನೀಡಿದ, ಆದಾಯ ತೆರಿಗೆ ಸಂಹಿತೆ (1986) ಜಾರಿಗೆ ತಂದು ಕಡಿಮೆ ಆದಾಯ ಗಳಿಸುವವರಿಗೆ ಅನುಕೂಲ ಮಾಡಿಕೊಟ್ಟ.

ವಿದೇಶಾಂಗ ನೀತಿ ಬಲದ ಮೂಲಕ ಶಾಂತಿ ಎಂಬುದು ಇವನ ವಿದೇಶಾಂಗ ನೀತೀಧ್ಯೇಯ ವಾಗಿತ್ತು. ತನ್ನ 2 ಅವಧಿ ಆಳ್ವಿಕೆಯಲ್ಲಿ ಶೇ 35 ಭಾಗ ರಕ್ಷಣೆಯನ್ನು ಹೆಚ್ಚಿಸಿದ. ರಷ್ಯದ ಪ್ರಧಾನಿ ಗೊರ್ಬಚೆವ್ ಜೊತೆ ಮಾತುಕತೆಯ ಮೂಲಕ ರಷ್ಯದೊಂದಿಗೆ ಉತ್ತಮ ಸಂಬಂಧ ವೃದ್ಧಿಸಿದ. ಇವನ ತೈಲನೀತಿ, ಯುದ್ಧ ಮತ್ತು ಆರ್ಥಿಕ ಶೀತಲ ಸಮರ ರಷ್ಯದ ಕಮುನಿಸ್ಟ್‍ನಾಶಕ್ಕೆ ಕಾರಣ. ಅಂತರಿಕ್ಷ ಆಧಾರಿತ ರಕ್ಷಣಾ ವ್ಯವಸ್ಥೆಗೆ ಮಹತ್ತ್ವ ನೀಡಿ ನ್ಯೂಕ್ಲಿಯರ್ ಯುದ್ಧ ಸಾಮಗ್ರಿ, ಮಿಸೆಲ್‍ಗಳ ಹೆಚ್ಚಿಸಿದ. ಇದು ಅಂತರಿಕ್ಷ ಯುದ್ಧಗಳು (ಸ್ಟಾರ್‍ವಾರ್ಸ್) ಎಂದು ಹೆಸರಾಯಿತು. ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಸಮರ ಸಾರಿದ, ಅಮೆರಿಕದ ಬಾಂಬರ್‍ಗಳನ್ನು ಲಿಬಿಯಕ್ಕೆ ಕಳುಹಿಸಿ ಲಿಬಿಯ ಸಮಸ್ಯೆ ಬಗೆಹರಿಸಿದ. ಮಧ್ಯ ಅಮೆರಿಕ, ಏಷ್ಯ ಹಾಗೂ ಆಫ್ರಿಕಗಳಲ್ಲಿ ಕಮ್ಯುನಿಸ್ಟ್ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದ. ಆಫ್ಘಾನಿಸ್ತಾನದ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ನೀಡಿದ, ಇಸ್ರೇಲ್-ಲಿಬಿಯದ ನಡುವೆ ಶಾಂತಿ ಒಪ್ಪಂದ ಮಾಡಿಸಿದ. ಪರ್ಷಿಯನ್ ಕೊಲ್ಲಿಯುದ್ಧ (ಇರಾನ್-ಇರಾಕ್ ಯುದ್ಧ)ದಲ್ಲಿ ತೈಲದ ಹರಿವನ್ನು ಕಾಪಾಡಿಕೊಂಡು ಆ ದೇಶಗಳಿಗೆ ಯುದ್ಧ ಸಾಮಗ್ರಿಗಳು ಮತ್ತು ಅಣ್ವಸ್ತ್ರಗಳನ್ನು ಪೂರೈಸಿದ. ಇರಾನಿನ ಅಯತುಲ್ಲಾ ಕೊಮೆನಿ ವಿರುದ್ಧ ಸದ್ದಾಂ ಹುಸೇನ್ (ಇರಾಕ್) ಬೆಂಬಲನೀಡಿದ. ಇರಾಕ್‍ಗೆ ಜೈವಿಕಾಸ್ತ್ರಗಳನ್ನು ವೈದ್ಯಕೀಯ ಉದ್ದೇಶಕ್ಕೆ ನೀಡಿದ. 1989ರಲ್ಲಿ ಜಾರ್ಜ್ ಎಚ್. ಡಬ್ಲ್ಯೂ. ಬುಷ್ ಅಧ್ಯಕ್ಷನಾದ ಅನಂತರ ಕ್ಯಾಲಿಫೋರ್ನಿಯಕ್ಕೆ ಹೋಗಿ ನೆಲಸಿ ತನ್ನ ಜೀವನಚರಿತ್ರೆ ಬರೆದ. ಇವನ ಹೆಸರಲ್ಲಿ ರೇಗನ್ ಪ್ರೆಸಿಡೆನ್ಶಿಯಲ್ ಲೈಬ್ರರಿ (1994) ಸ್ಥಾಪನೆ ಮಾಡಲಾಯಿತು. ವಾಷಿಂಗ್‍ಟನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೊನಾಲ್ಡ್ ರೇಗನ್ ನ್ಯಾಶನಲ್ ಏರ್‍ಪೋರ್ಟ್ ಎಂದು ಬಿಲ್‍ಕ್ಲಿಂಟನ್ ಅವಧಿಯಲ್ಲಿ ನಾಮಕರಣ ಮಾಡಲಾಯಿತು. 2001ರಲ್ಲಿ ಯು.ಎಸ್.ಎಸ್. ರೊನಾಲ್ಡ್ (ಸಿ.ವಿ.ಎನ್.-76) ಎಂಬ ಯುದ್ಧ ನೌಕೆಯನ್ನು ಇವನ ಗೌರವಾರ್ಥವಾಗಿ ಸ್ಥಾಪಿಸಲಾಗಿದೆ. ಇವನು 1994ರಿಂದ ಅನಾರೋಗ್ಯಕ್ಕೆ ತುತ್ತಾದ. 2004 ಜೂನ್ 5ರಂದು ಕ್ಯಾಲಿಫೋರ್ನಿಯದ ಲಾಸ್ ಏಂಜೆಲ್ಸ್‍ನಲ್ಲಿ ನಿಧನಹೊಂದಿದ.	
(ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ